ಶುಕ್ರವಾರ, ಜನವರಿ 8, 2010

ಪೇಡ್ ನ್ಯೂಸ್ ಗಿಂತ ಮಾನಸಿಕ, ಸಾಮಾಜಿಕ ಭ್ರಷ್ಟತೆ ಅಪಾಯಕಾರಿ!

ಮೀಡಿಯಾ ಅಂದಾಕ್ಷಣ ನಮಗೆ ತಟ್ಟನೆ ಸುದ್ದಿ ಪತ್ರಿಕೆಗಳು, ಟಿವಿ ಚಾನೆಲ್ ಗಳು ಮಾತ್ರ ನೆನಪಾಗಿಬಿಡುತ್ತವೆ. ಆದರೆ, ಮೀಡಿಯಾದ ಹರವು ಇಷ್ಟೇ ಅಲ್ಲ. ಇವು ಇದರ ಭಾಗಗಳಷ್ಟೇ. ನಾಟಕ, ಚಿತ್ರಕಲೆ, ಸಂವಹನ ಕಲೆ ಇವೆಲ್ಲವೂ ಮಾಧ್ಯಮದ ಭಾಗಗಳೇ. ಸಾಹಿತ್ಯ ಕೂಡ ಒಂದು ಮೀಡಿಯಂ. ಹಾಗೇ ಟಿವಿ ಸೀರಿಯಲ್, ಸಿನಿಮಾ, ಡಾಕ್ಯುಮೆಂಟರಿ, ಶಾರ್ಟ್ ಫಿಲಂ, ಪೇಂಟಿಂಗ್, ಸಂಗೀತ...

ಮೀಡಿಯಾ ಅಂದಾಕ್ಷಣ ಪತ್ರಿಕೆಗಳು, ಚಾನೆಲ್ ಅನ್ನಿಸೋದು ವಾಸ್ತವ.

ಸುತ್ತಲ ಜಗತ್ತಿನ ವಿದ್ಯಮಾನಗಳ ದಾಖಲಿಸುವ ಮತ್ತು ಅದನ್ನು ಇತರರಿಗೆ ತಲುಪಿಸುವ ಕೆಲಸ ಪತ್ರಿಕೆಗಳು ಅಥವಾ ಸುದ್ದಿ ಜಾಲಗಳು ಮಾಡುತ್ತವೆ. ಇದರ ಸತ್ಯಾಸತ್ಯತೆಗಳು ಆಯಾ ಪತ್ರಿಕೆಗಳು ಮತ್ತು ಸುದ್ದಿಪ್ರಸರಣ ಮಾಧ್ಯಮಗಳ ಕ್ರೆಡಿಬಿಲಿಟಿಯನ್ನು ಅವಲಂಭಿಸಿರುತ್ತದೆ. ವಿಶ್ವಾಸಾರ್ಹತೆ ಅನ್ನೋದು ನಿರಂತರ ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಅಥವಾ ಹೊಣೆಗಾರಿಕೆ ಆಗಿರುತ್ತದೆ. ಮೂಲತಃ ಒಂದು ಪತ್ರಿಕೆ ಅಥವಾ ಚಾನೆಲ್ ವಿಶ್ವಾಸಾರ್ಹತೆ ಹೊಂದಬೇಕಾದ್ದು ಅದರ ಹರವು ಹೆಚ್ಚಿಸಿಕೊಳ್ಳುವ ಅಥವಾ ವ್ಯಾಪ್ತಿ ಹೆಚ್ಚಿಸಿಕೊಳ್ಳುವ ಉದ್ದೇಶದ್ದಾಗಿರುತ್ತದೆ. ಅದಕ್ಕೂ ಮುಖ್ಯವಾಗಿ ವಾಣಿಜ್ಯ ಉದ್ದೇಶದ್ದೂ ಆಗಿರುತ್ತದೆ.

ಜಾಹೀರಾತು ಜಾಲ ತನ್ನ ಎಲ್ಲ ಸಾಧ್ಯತೆಗಳ ಬಗ್ಗೆ ಗಮನಹರಿಸುತ್ತಿರುತ್ತದೆ. ಅದೂ ಕೂಡ ಸಂವಹನದ ಅಥವಾ ತಲುಪುವ ಇಲ್ಲವೇ ತಲುಪಿಸುವ ಉಮೇದಿಯದ್ದಾಗಿರುತ್ತದೆ. ಇವೆರಡನ್ನು ಬೆಸೆಯುವ ಇಲ್ಲವೇ ಎರಡರ ನಡುವೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಸಾರ್ವಜನಿಕ ಸಂಪರ್ಕ (ಪಬ್ಲಿಕ್ ರಿಲೇಷನ್ಸ್) ಎನ್ನುವ ಮತ್ತೊಂದು ಮೀಡಿಯಾದ ಸ್ವರೂಪ ನಿರ್ವಹಿಸುತ್ತದೆ. ಈ ಎಲ್ಲದಕ್ಕೂ ಅದರದೇ ಆದ ಸಾಧ್ಯತೆಗಳು ಮತ್ತು ಮಿತಿಗಳಿವೆ. ಎಲ್ಲವೂ ತಮ್ಮ ಉದ್ದೇಶಗಳಿಗಾಗಿ ಅವುಗಳ ಈಡೇರಿಕೆಗಾಗಿ ಹಾತೊರೆಯುತ್ತಿರುತ್ತವೆ.

ಆದರೆ, ಹೇಗಾದರೂ ಮಾಡಿ ಗೆಲ್ಲಲೇಬೇಕು, ತಲುಪಲೇಬೇಕು, ತಲುಪಿಸಲೇಬೇಕು... ಎನ್ನುವ ಪೈಪೋಟಿ, ಜಿದ್ದುಗಳು ವ್ಯವಸ್ಥೆಯನ್ನು ಒಂದಷ್ಟು ಭ್ರಷ್ಟಗೊಳಿಸಿಬಿಡುತ್ತವೆ. ಇಲ್ಲಿಯೇ ಸ್ವಾರ್ಥದ ಸಾಧನೆಗೆ ದಾರಿ ತೆರಕೊಳ್ಳುತ್ತದೆ. ಹಾಗೆ ಒಳನುಸುಳಿ ಬರೋದೇ ಫೇವರಿಸಂ ಎನ್ನುವ ದೊಡ್ಡ ಭೂತ. ಈ ಫೇವರಿಸಂ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಸ್ವರೂಪದಲ್ಲಿರುತ್ತದೆ. ನಾವು ಭ್ರಷ್ಟತೆ ಅನ್ನೋದನ್ನು ಬರಿಯದೇ ಆರ್ಥಿಕ ದೃಷ್ಟಿಯಿಂದ ನೋಡುತ್ತಿದ್ದೇವೆ. ಅದಕ್ಕಿಂತ ಅಪಾಯಕಾರಿ ಮತ್ತು ಅನೈತಿಕವಾದದ್ದು ಮಾನಸಿಕ ಮತ್ತು ಸಾಮಾಜಿಕ ಭ್ರಷ್ಟತೆ. ಇವೆರಡೂ ಯಾವತ್ತೋ ಮೀಡಿಯಾ ಲೋಕವನ್ನು ಭ್ರಷ್ಟಗೊಳಿಸಿಟ್ಟಿದೆ. ನಿಜ ಹೇಳಬೇಕೆಂದರೆ ಇದೇ ಅತ್ಯಂತ ಅಪಾಯಕಾರಿ ಮತ್ತು ಜೀವ ವಿರೋಧಿ ಭ್ರಷ್ಟಾಚಾರ.

ಈಗ ಇಡೀ ಮೀಡಿಯಾ ಜಗತ್ತನ್ನು ಕಾಡುತ್ತಿರುವ ಮತ್ತು ಅವಕೃಪೆಗೊಳಗಾಗುತ್ತಿರುವ ಅಪಾಯವೆಂದರೆ ಪೇಡ್ ನ್ಯೂಸ್! ದುಡ್ಡು ಪಡೆದು ಯಾರದೋ, ಯಾವುದೋ ವಿಷಯದ ಪರವಹಿಸುವುದು ಈಗ ಕೆಲ ಪತ್ರಿಕೆಗಳ, ಚಾನೆಲ್ ಗಳ ಚಾಳಿ ಆಗಿಹೋಗಿದೆ. ಕೆಲವೇ ಪತ್ರಕರ್ತರು ಮತ್ತು ಸಾರ್ವಜನಿಕ ಸಂಪರ್ಕ ವಲಯ, ಕಾರ್ಪೋರೇಟ್ ವ್ಯವಸ್ಥೆಯನ್ನು ಖರೀದಿಸುವ ತಾಕತ್ತು ಇವತ್ತು ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಮತ್ತು ತಲೆಹಿಡುಕರಿಗೆ ಪ್ರಾಪ್ತವಾಗುತ್ತಿದೆ. ಮನಿ ಸೆಂಟರ್ಡ್ ಎಕಾನಮಿ ವ್ಯವಸ್ಥೆಯಲ್ಲಿ ಯಾವ ಆದರ್ಶಗಳಿರಲು ಸಾಧ್ಯ?

ಎಲ್ಲರೂ, ಎಲ್ಲ ರಂಗದವರೂ ದುಡ್ಡಿನ ಮೇಲೆ ದುಡ್ಡು ಗಳಿಸುತ್ತಿರುವಾಗ, ಐಷಾರಾಮಿ ಜಿಂದಗೀ ನಡೆಸುತ್ತಿರುವಾಗ ಮೀಡಿಯಾ ಜಗತ್ತೇಕೆ ಒಣಗುತ್ತಿರಬೇಕು? ಎನ್ನುವ ಮನಸ್ಥಿತಿಯವರಿಂದಲೇ ಇಂದು ಮೀಡಿಯಾ ಕರಪ್ಟ್ ಆಗುತ್ತಿದೆ. ಅಥವಾ ಇಂಥ ಆಮಿಷಗಳಿಂದ ಬೇರೆ ರಂಗ ತನ್ನ ಮ್ಯುಚುಯಲ್ ಬೆನಿಫಿಟ್ ಗೋಸ್ಕರ್ ಹೀಗೆ ಮೀಡಿಯಾ ತಲೆಹಿಡಿಯುವ ಕೆಲಸ ಮಾಡುತ್ತಿದೆ.

 ನೈತಿಕತೆ ಅನ್ನೋದು ಇಂದು ಬದುಕಿನ ಎಲ್ಲಾ ಮಜಲುಗಳಿಂದ ಕಾಣೆಯಾಗುತ್ತಿರುವುದರ ಸೂಚನೆ ಇದು. ನಮ್ಮ ವೈಯಕ್ತಿಕ ಬದುಕಿನಲ್ಲೇ ನಾವೆಷ್ಟರಮಟ್ಟಿಗೆ ನೈತಿಕತೆಗೆ ಪ್ರಾಮುಖ್ಯತೆ ಕೊಡುತ್ತಿದ್ದೇವೆ? ಜೀವನಮೌಲ್ಯಗಳಿಗೆ ನಮ್ಮ ಕಾಳಜಿ ಎಷ್ಟಿದೆ? ಯಾರು ಇದನ್ನೆಲ್ಲ ಪಕ್ಕಾ ಪಾಲಿಸಿಕೊಂಡು ಬರುತ್ತಿದ್ದಾರೆ?... ಆತ್ಮವಿಮರ್ಶೆ ಮಾಡಿಕೊಂಡರೆ ನಿಜದ ಬಣ್ಣ ಮುಂದೆ ಬರುತ್ತದೆ. ಆ ಧೈರ್ಯ ಯಾರಿಗಿದೆ?

ಫೇವರಿಸಂ ಅನ್ನೋದು ಬರಿಯ ದುಡ್ಡಿನ ಆಮಿಷಕ್ಕಷ್ಟೇ ಸಾಧ್ಯವಾಗುವಂಥದ್ದಲ್ಲ. ಜಾತಿ, ಧರ್ಮ, ಪ್ರದೇಶ, ಅಂತಸ್ತಿನ ಪ್ರಲೋಭನೆಗಳೂ ಮೀಡಿಯಾ ಲೋಕದ ಭ್ರಷ್ಟತೆಗೆ ದೊಡ್ಡ ಕಾಣಿಕೆ ನೀಡಿವೆ. ಮೀಡಿಯಾದ ಅಂತಃಲೋಕವೂ ಜಾತಿ, ಧರ್ಮ, ಪ್ರಾದೇಶಿಕ ಭಿನ್ನಾಭಿಪ್ರಾಯಗಳಿಂದ ಸಾಕಷ್ಟು ಭ್ರಷ್ಟಗೊಂಡಿದೆ. ಪ್ರತಿಭೆ, ಸ್ಪಷ್ಟ ಮತ್ತು ನೈಜ ಕಾಳಜಿಗಳು ಜಾತಿ, ಧರ್ಮ, ಪ್ರಾದೇಶಿಕತೆಯ ಸಂಕುಚಿತ ಮನೋಭಾವನೆಗಳ ಮುಂದೆ  ಗೌನವಾಗುತ್ತಿರುವುದೂ ಮತ್ತು ಗೌನವಾಗಿಸುತ್ತಿರುವುದು ಕೂಡ ದೊಡ್ಡ ಭ್ರಷ್ಟತೆ ಅಲ್ಲವೇನು?

ಮಾನಸಿಕ ಮತ್ತು ಸಾಮಾಜಿಕ ಭ್ರಷ್ಟತೆ ಆರ್ಥಿಕ ಭ್ರಷ್ಟತೆಗಿಂತ ಅಪಾಯಕಾರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ