ಬುಧವಾರ, ಮೇ 19, 2010

"ಮಲೆಗಳಲ್ಲಿ ಮದುಮಗಳು"

ಮೈಸೂರು ರಂಗಾಯಣದಂಗಳದಲ್ಲಿ ಮಲೆನಾಡು ಸೃಷ್ಟಿಯಾಗಿ, ಅದರೊಳಗೆ "ಮಲೆಗಳಲ್ಲಿ ಮದುಮಗಳು" ಕನ್ನಡದ ಮಹಾಕಾದಂಬರಿ ಅಕ್ಷರಶಃ ಜೀವಪಡಕೊಂಡು ಒಂದಿಡೀ ರಾತ್ರಿ ಬದುಕಿತು! (ಹೀಗೆ ಹಲವು ರಾತ್ರಿಗಳನ್ನೂ ಈಗ ಕಾಣುತ್ತಿದೆ)

ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಒಂದು ವಿಶಿಷ್ಠ ಪ್ರಯೋಗವಾಗಿ ದಾಖಲಾಗಿರುವ "ಮಲೆಗಳಲ್ಲಿ ಮದುಮಗಳು" ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ.

ಮಲೆನಾಡಿನ ಒಂದು ಭಾಗವನ್ನೇ ಕತ್ತರಿಸಿ ತಂದು ರಂಗಾಯಣದ ಆವರಣದಲ್ಲಿಟ್ಟಂತಿದೆ ರಂಗವಿನ್ಯಾಸ. ಇಡೀ ನಾಟಕದ ಜೀವಾಳವೇ ಆ ರಂಗವಿನ್ಯಾಸ (ರಂಗವಿನ್ಯಾಸ: ದ್ವಾರ್ಕಿ) ಎಂದರೆ ತಪ್ಪಲ್ಲ. ಕಥೆಯ ಪ್ರಮುಖ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಅದರಿಂದ ಪಾತ್ರಗಳನ್ನು ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿತ್ತು. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಮೂಡ್ ಗೆ ತಕ್ಕಂತೆ ರಂಗಸಜ್ಜಿಕೆ ಮಾಡಲಾಗಿತ್ತು. ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿನದು ಮಿಕ್ಕ ರಂಗಸಜ್ಜಿಕೆಗಳಲ್ಲಿ... ಹೀಗೆ ದೃಶ್ಯಗಳು ವಿವಿಧ ರಂಗಸಜ್ಜಿಕೆಗಳಿಗೆ ಬದಲಾದಂತೆ ಪ್ರೇಕ್ಷಕರೂ ಶಿಫ್ಟ್ ಆಗುತ್ತಿದ್ದರು. ಬಸಲಿಂಗಯ್ಯ ಸೂಕ್ತ ಸಾಹಸದ ನಿರ್ಧಾರವನ್ನೇ ಕೈಗೊಂಡಿದ್ದಾರೆ. ಇಂಥ ಪರಿಸರ ಸ್ನೇಹಿ ನಾಟಕಕ್ಕೆ ಈ ವಾತಾವರಣವೇ ಬೇಕು ಕೂಡ. ಇದೊಂದು ವಿಶಿಷ್ಠ ರಂಗಾನುಭವ. ಈ ಪ್ರಯೋಗ ಇಂಟೀಮೇಟ್ ಪ್ರೊಸಿನಿಯಂ ಥಿಯೇಟರ್ ಅಥವಾ ಎನ್ವಿರಾನ್ಮೆಂಟ್ ಥಿಯೇಟರ್ ಗಿಂತ ಕೊಂಚ ಭಿನ್ನವಾಗಿದೆ. ಈ ಸಾಹಸ ನೋಡಿದಾಗ ನನಗೆ ಮತ್ತೋರ್ವ ಹೆಸರಾಂತ ರಂಗಕರ್ಮಿ ಅಮೀರ್ ರಜಾ ಹುಸೇನ್ ನೆನಪಾದರು. ದಿ ಲೆಜೆಂಡ್ ಆಫ್ ರಾಮಾ, ಕಾರ್ಗಿಲ್ ಕುರಿತ ಫಿಫ್ಟಿ ಡೇಸ್ ಮತ್ತಿತರ ಪ್ರಯೋಗಗಳನ್ನು ಇಂಥ ವಿನ್ಯಾಸದಲ್ಲಿ ನಿರೂಪಿಸುವುದರಲ್ಲಿ ಅವರು ಸಿದ್ಧಹಸ್ತರು. ಕಾರ್ಗಿಲ್ ಕುರಿತ ನಾಟಕಕ್ಕೆ ಅವರು ಆರು ಎಕರೆ ಪ್ರದೇಶವನ್ನೇ ಬಳಸಿಕೊಂಡಿದ್ದರು. ಅಲ್ಲಿ ಹೆಲಿಕಾಪ್ಟರ್, ಯುದ್ಧದ ಸನ್ನಿವೇಶಗಳನ್ನೆಲ್ಲ ಯಥಾವತ್ ಆಗಿ ಸೃಷ್ಟಿಸಿದ್ದರು. ಅಲ್ಲೂ ಪ್ರೇಕ್ಷ್ಕರು ದೃಶ್ಯದಿಂದ ದೃಶ್ಯಕ್ಕೆ ಶಿಫ್ಟ್ ಆಗುತ್ತಿದ್ದರು.
ಕನ್ನಡದ ಸಂದರ್ಭದಲ್ಲಿ ಕ್ರೈಸ್ತನ ಬಗ್ಗೆ ಇಕ್ಬಾಲ್ ಅಹಮದ್, ವಾಲ್ಟರ್ ಡಿಸೋಜ 'ಸ್ಪಾರ್ಟಕಸ್' ನಾಟಕ (ಧಾರವಾಡದ ಸಾಹಿತ್ಯ ಭವನ ಕಟ್ಟಡವನ್ನೇ ಬಳಸಿಕೊಂಡು ಮಾಡಿದ ಪ್ರಯೋಗ. ರಂಗವಿನ್ಯಾಸ ನಾನು ಮಾಡಿದ್ದೆ) ಪ್ರಯೋಗಗಳಲ್ಲಿ ತಕ್ಕಮಟ್ಟಿನ ಇಂಥ ತಂತ್ರ ಬಳಸಿದ್ದರ ನೆನಪಾಗುತ್ತಿದೆ.

ರಂಗಾಯಣದ ಮಾಗಿದ ಕಲಾವಿದರು ಮತ್ತು ಈ ಪ್ರಯೋಗಕ್ಕೆಂದೇ ತರಬೇತುಗೊಂಡ ಹೊಸಬರು ಒಂದಿಡೀ ರಾತ್ರಿ ಸತತ ಒಂಭತ್ತು ಗಂಟೆಗಳ ಕಾಲ ನಾಲ್ಕು ರಂಗ ಸಜ್ಜಿಕೆಗಳ ಮೇಲೆ ಇಡೀ ಕಾದಂಬರಿಯನ್ನೇ ಬದುಕಿದರು. ಮಲೆನಾಡಿನ ಪರಿಸರ, ಅಲ್ಲಿನ ಜನಸಂಸ್ಕೃತಿಯನ್ನು ಕಣ್ಮುಂದೆ ಕಟ್ಟಿಕೊಟ್ಟರು. ಡಾ. ಕೆ.ವೈ. ನಾರಾಯಣ ಸ್ವಾಮಿ ಕಾದಂಬರಿಯನ್ನು ರಂಗಕ್ಕಿಳಿಸಿದ ಪರಿ, ಆ ಅದ್ಭುತ ರಂಗವಿನ್ಯಾಸ, ಬೆಳಕು, ರಂಗಪರಿಕರ, ಗುತ್ತಿ, ಹುಲಿಯ (ಗುತ್ತಿನಾಯಿ) ಪಾತ್ರ, ಹೆಗ್ಗಡತಿಯರು, ಪೀಂಚಲು, ಐತಿ, ಸುಬ್ಬಣ್ಣ ಹೆಗ್ಗಡೆ, ತಿಮ್ಮಪ್ಪ ಹೆಗ್ಗಡೆ, ನಾಗಕ್ಕ, ವೆಂಕಟಣ್ಣ, ಪಾದ್ರಿ, ದೇವಯ್ಯ ಪಾತ್ರಗಳ ಲೀಲಾಜಾಲದ ಅಭಿನಯ ಒಂದು ವಿಶಿಷ್ಠ ರಂಗಾನುಭವ ನೀಡಿತು. ಇವರೆಲ್ಲರ ಶ್ರಮಕ್ಕೆ ಹ್ಯಾಟ್ಸಾಫ್!

ಯಾವುದೇ ಕೃತಿಯ ಸಬ್ ಟೆಕ್ಸ್ಟ್ ಮೇಲೇ ಕಣ್ಣಿಡುವ ಬಸವಲಿಂಗಯ್ಯ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಮೂಲ ಆಶಯಗಳನ್ನು ಕಡೆಗಣಿಸಿಲ್ಲ. ಆದರೆ, ಇಡೀ ಕಥಾಹಂದರದ ಒಳದನಿಯಲ್ಲಿ ಗುತ್ತಿ ಪಾತ್ರಕ್ಕಿರುವ ಸ್ಕೋಪ್ ಬಸುಗೆ ಸೆಳೆದಂತಿದೆ. ಅದಕ್ಕೆ ಪುಶ್ ಅಪ್ ನೀಡಿ, ಆತನ ಮತ್ತಷ್ಟು ಹೀರೋ ಮಾಡುವ ಸಾಹಸಕ್ಕೆ ಇಲ್ಲಿ ಅವಕಾಶ ಇದ್ದುದನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಆ ಮೂಲಕ ಇಡೀ ಕಾದಂಬರಿಯನ್ನು ಮತ್ತೆ ಬರೆದಿದ್ದಾರೆ ಬಸವಲಿಂಗಯ್ಯ.

ಕೆಲವು ಪಾತ್ರಗಳ ಮೇಲಿನ ಅವರ ಸಾಮಾಜಿಕ ಕಾಳಜಿಗಿಂತ ರಾಜಕೀಯ ಕಾಳಜಿ ಹೆಚ್ಚು ಕೆಲಸ ಮಾಡಿದೆ. ಗುತ್ತಿ ಬಗ್ಗೆ ಅವರದು ಹೀರೋಯಿಸಂ ಅಪ್ರೋಚ್. ಹೆಣ್ಣು ಪಾತ್ರಗಳಿಗೆ ಅವರದು ಫೆಮಿನಿಸ್ಟ್ ಧೋರಣೆ. ಕಾದಂಬರಿಯ ಕಥೆ ಕೂಡ ಫೆಮಿನಿಸಂ ಗೆ ಹೆಚ್ಚು ಒತ್ತು ಕೊಟ್ಟಿದೆ. ಈ ಕಾಲದಲ್ಲಂತೂ ಫೆಮಿನಿಸಂ ಅನ್ನೋದು ಒಂದು ಜನಪ್ರಿಯ ಧೋರಣೆಯಾಗಿಬಿಟ್ಟಿದೆ... ಮಾರುಕಟ್ಟೆ ಸಂಸ್ಕೃತಿಯ ಲಾಭಕ್ಕೆ ಹುಟ್ಟಿಕೊಂಡ ಫೆಮಿನಿಸಂ ಮತ್ತು ಮಲೆಗಳಲ್ಲಿ ಮದುಮಗಳ ಫೆಮಿನಿಸಂ ಎರಡೂ ಬೇರೆ ನೆಲೆಯಲ್ಲಿದ್ದರೂ ಕಾಲದ ಹೊಡೆತಕ್ಕೆ ಮಲೆಗಳಲ್ಲಿ ಮದುಮಗಳೂ ಕೂಡ ಮಾರುಕಟ್ಟೆಗೇ ಬಂದು ನಿಲ್ಲುತ್ತಾಳೆ. ಇದು ಈಗ ನಾಟಕವಾಗಿ ಪ್ರದರ್ಶನಗಳ ಮೇಲೆ ಪ್ರದರ್ಶನ ಕಾಣುತ್ತಿರುವುದು ಕೂಡ ಮಾರುಕಟ್ಟೆ (ಸ್ವಪ್ರತಿಷ್ಠೆ, ಸ್ವಾರ್ಥ, ಪ್ರಚಾರ) ಸಂಸ್ಕೃತಿಯ ನೆಲೆಯಲ್ಲೇ.

ಇಡೀ ನಾಟಕದಲ್ಲಿ ಹೆಗ್ಗಡೆಯರ ದರ್ಪ, ಅವರ ಹೆಂಗಸರ ಹಾದರ, ಅವರೊಳಗೆ ಆಗಾಗ ತಮ್ಮ ಹಿತಾಸಕ್ತಿಗಾಗೇ ಮಿಸುಕಾಡುವ ಮನುಷ್ಯತ್ವ, ದಲಿತರ ಸ್ಥಿತಿ, ನಾಯಿ, ಅಲ್ಲಿನ ಪಶುಪಕ್ಷಿಗಳು, ಕಾಡು, ಹೆಂಡ ....ಹೀಗೆಲ್ಲ ಎಲ್ಲದಕ್ಕೂ ಕಥೆ ಮತ್ತು ನಿರ್ದೇಶಕರ ದೃಷ್ಟಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮದ ಮೇಲಿದೆ. ರಾಜಕೀಯ ಆಯಾಮಕ್ಕೆ ಕಥೆಯ ಆಶಯ ಅಥವಾ ನಿರ್ದೇಶಕ ಕೈಹಾಕೋದಿಲ್ಲ. ಅದು ಡೇಂಜರ್ ಎನ್ನುವ ಎಚ್ಚರಿಕೆ ಇಲ್ಲಿ ಕೆಲಸ ಮಾಡಿದೆ. ರಾಜಕೀಯ ಆಯಾಮದಲ್ಲೂ ನಾಟಕ ಕಂಡಿದ್ದರೆ ಗುತ್ತಿ ಇಲ್ಲಿ ಕ್ರಾಂತಿಕಾರಿ ಹೀರೋ ಆಗುತ್ತಿದ್ದ. ಆದರೆ, ಸಂಘರ್ಷ ಬೇಕಾಗೇ ಇಲ್ಲ ಇಲ್ಲಿ! ಗುತ್ತಿ ಕೇವಲ ಆತ್ಮಾನುಕಂಪ ಗಳಿಸೋದಕ್ಕೆ ಯತ್ನಿಸುತ್ತಾನೆ. ಅವನ ಮ್ಯಾನರಿಸಂ, ಸುಳ್ಳು, ತಂತ್ರ, ದೈನ್ಯತೆ ಎಲ್ಲವೂ ಮೇಲ್ವರ್ಗದವರ ಅನುಕಂಪ ಸಂಪಾದನೆಗೆ ಸೀಮಿತಗೊಂಡಿದೆ. ಮೀಸಲಾತಿ ಕೂಡ ಇದೇ ಮನಸ್ಥಿತಿಯದು. ಮೀಸಲಾತಿ ಅನ್ನೋದು ಮೇಲ್ವರ್ಗದವರ ಹುನಾರೇ. ಕ್ರಾಂತಿಯ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕೆನ್ನುವ ಅಂಬೇಡ್ಕರ್ ಹಂಬಲದ್ದಲ್ಲ ಇದು. ಅವರು ಕಂಡ ಕನಸಿನಂತೆ ಕ್ರಾಂತಿ ಏನಾದರೂ ನಡೆದಿದ್ದರೆ ದಲಿತರು ಇನ್ನೂ ಮೀಸಲಾತಿ ನಂಬಿಕೊಂಡೇ ಬದುಕಬೇಕಾಗುತ್ತಿರಲಿಲ್ಲ. ಅವರದೇ ರಾಜ್ಯ ಸ್ಥಾಪನೆಯಾಗುತ್ತಿತ್ತೋ ಏನೋ? ಪ್ರಸಕ್ತ ಸ್ಥಿತಿಯಲ್ಲಿ ಮಾಯಾವತಿ ಮಾತ್ರ ದಲಿತ ನಾಯಕತ್ವಕ್ಕೆ ಯತ್ನಿಸುತ್ತಿರುವುದ ಬಿಟ್ಟರೆ ಉಳಿದ ದಲಿತ ನಾಯಕರೆಲ್ಲ ಆಯಾಯ ಪಕ್ಷಗಳ ಮೀಸಲಾತಿ ಎನ್ನುವ ಕಂಫರ್ಟ್ ಝೋನ್ ಗಳಲ್ಲಿ ಬಂಧಿಯಾಗಿದ್ದಾರಲ್ಲ... ಅವರದೂ ಗುತ್ತಿಯ ಪಾಡು. ಇಡೀ ಜನಾಂಗ ಗುತ್ತಿನಾಯಿಯ ಪಾಡಿನಂಥದು. ನಾಟಕದಲ್ಲಿ ಗುತ್ತಿ ಉಳಿಸಲು ಹೇಗೆ ನಾಯಿ ಪ್ರವಾಹದ ಸೆಳವಿಗೆ ಎದೆಕೊಟ್ಟು ನೀರುಪಾಲಾಗುವುದೋ, ಹಾಗೆ ದಲಿತರೆಲ್ಲ ತಮ್ಮ ನಾಯಕರ ಕುರ್ಚಿ-ಮಾನ ಉಳಿಸಲು ಈಗಲೂ ಶೋಷಣೆಯ ಸೆಳವಲ್ಲೇ ಈಜುತ್ತಿದ್ದಾರೆ.

ದೇವಯ್ಯ ಮತ್ತಿತರ ಗೌಡರ ಭಾನಗಡಿಗಳೆಲ್ಲ ಇಲ್ಲಿ ಹಾಸ್ಯದ ಲೇಪದಲ್ಲಿ ತೇಲಿ ರೋಮ್ಯಾಂಟಿಕ್ ಆಗಿ ಕಾಣಿಸುತ್ತವೆ. ಅದೆಲ್ಲ ಅವರ ರಸಿಕತೆ ಅಷ್ಟೆ ಎನ್ನುವ ಹಾಗಿದೆ ಚಿತ್ರಣ. ಗೌಡತಿಯರು ಅಥವಾ ಹೆಗ್ಗಡತಿಯರ ಹಾದರಗಳು, ಅವರಿವರ ಜತೆ ಹಾಸಿಗೆ ಬದಲಾಯಿಸುವ ಲಂಪಟ ಹೆಣ್ಣುಗಳು, ಸ್ವತಃ ಸೊಸೆಯನ್ನೇ ಹಾದರದ ಪ್ಪಲಂಗಕ್ಕೇರಿಸುವ ಅತ್ತೆಯಂದಿರು... ಇದೆಲ್ಲ ರಸಿಕತೆ ಮತ್ತು ಲೈಂಗಿಕ ಬಯಕೆಗಳಷ್ಟೇ ಎಂದು ತೋರಿಸುವುದು ನಾಟಕದ ಒಳಗಿನ ಹುನಾರು. ಇದನ್ನೇ ಬೇರೊಂದು ಕೆಳಜಾತಿ ಮಾಡಿದ್ದರೆ? ಅದು ಹಾದರ! ಕಥೆಯ ಈ ಮನೋಧರ್ಮವೂ ಒಂದು ಹಿಂಸೆ.

ಕ್ರೈಸ್ತ ಪಾದ್ರಿ ಪಾತ್ರವನ್ನು ತುಂಬ ತಮಾಷೆಯಾಗಿ ಕಟ್ಟಿಕೊಟ್ಟಿದ್ದಾರೆ. ಸೈಕಲ್ ಎನ್ನುವುದು ಇಲ್ಲಿ ಆಧುನಿಕ ಮನೋಧರ್ಮದ ಸಂಕೇತ. ಆಗಿನ ಮಲೆನಾಡಿಗರ ಮನಸ್ಥಿತಿ ಆಧುನಿಕ ವಿರೋಧಿಯಾಗಿತ್ತು ಎನ್ನುವುದಕ್ಕೆ ಅದನ್ನು ಲೇವಡಿ ಮಾಡುವ ದೃಶ್ಯವೇ ಸಾಕ್ಷಿ. ಅದು ಒಟ್ಟು ಮತವೊಂದರ ಲೇವಡಿಯ ಒಂದಂಶದ ವಿಸ್ತಾರ ಪಡಕೊಳ್ಳುವುದು ಇದರೊಳಗಿನ ದೊಡ್ಡ ಹಿಂಸೆ.

ಮತಾಂತರದ ಬಗ್ಗೆ ನಾಟಕದಲ್ಲಿ ಆಡಿದ ಮಾತುಗಳು ಮತೀಯವಾದದ ಸಂಕೇತವಾಗಿಯೂ ಕಾಡುತ್ತವೆ. ಸ್ವತಃ ಕುವೆಂಪು ಮತಾಂತರದ ವಿರೋಧಿಯಾಗಿದ್ದರು. ಅದಕ್ಕೆ ಅವರಿಗೆ ಹಿಂದು ಧರ್ಮದ ಮೇಲಿನ ಪ್ರೀತಿಯೇ ಕಾರಣವಿರಬಹುದು. ಅಥವಾ ರಾಮಕೃಷ್ಣ ಪರಮಹಂಸ, ವಿವೇಕಾನಂದರಿಂದ ಪಡೆದ ಸ್ಫೂರ್ತಿಯೂ ಕಾರಣವಿರಬಹುದು. ಹಿಂದೂ ಧರ್ಮದಲ್ಲಿ ಬ್ರಾಹ್ಮಣರ ಮೇಲಾಟ ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಅವರನ್ನು ಕಾಡಿಲ್ಲ ಎನ್ನುವುದು ಆಶ್ಚರ್ಯ!

ಹೆಗ್ಗಡೆಯರು ದಲಿತರ ಮೇಲೆ ಮಾಡುವ ದೌರ್ಜನ್ಯವಾಗಲಿ, ಅವರ ಬೆವರಿನ ಮೇಲೆ ತಮ್ಮ ಗೌಡಿಕೆಯ ದೌಲತ್ತಿನರಮನೆ ಕಟ್ಟುವುದಾಗಲಿ ಸಹಜ. ದಲಿತರ ಜತೆಗಿನ ಒಡನಾಟಕ್ಕೆ ಒಂದು ಮಟ್ಟಿನ ಮನುಷ್ಯತ್ವದ ಅಂತಃಕರಣವನ್ನು ಹೆಗ್ಗಡೆಯವರಿಗೆ ಅಂಟಿಸಿ, ಅದನ್ನೇ ಆಗಿನ ಜನಸಂಸ್ಕೃತಿಯ ಆದರ್ಶ ಎಂದು ನಾಟಕ ಹೇಳಹೊರಟಿದೆ. ದೌರ್ಜನ್ಯ, ದಲಿತರ ಶೋಷಣೆಯನ್ನು ಅದು ನೆಪಮಾತ್ರಕ್ಕೆ ಪ್ರಶ್ನಿಸುತ್ತದೆ. ಆದರೆ, ಪ್ರಶ್ನಿಸುವ ಧೋರಣೆ ರಾಜಕೀಯ. ಸಾಮಾಜಿಕ, ಸಾಂಸ್ಕೃತಿಕ ಬದ್ಧತೆಯಿಂದ ಕೂಡಿದ್ದಲ್ಲ ಎನಿಸಿತು.

ದಲಿತರೆಲ್ಲ ಅಥವಾ ಶೋಷಣೆಗೊಳಗಾದವರೆಲ್ಲ ಕ್ರೈಸ್ತ ಧರ್ಮಕ್ಕೆ ಅಥವಾ ಇನ್ನಾವುದೋ ಸಾಮಾಜಿಕ ಘನತೆ ತಂದುಕೊಡಬಲ್ಲ ಮತಕ್ಕೆ ಮತಾಂತರಗೊಂಡರೆ ಬ್ರಾಹ್ಮಣರ ಅಟ್ಟಹಾಸಕ್ಕೆ ಹೇಗೆ ಕಡಿವಾಣ ಬೀಳುತ್ತೊ, ಗೌಡರ ಪಾಳೆಗಾರಿಕೆಗೂ ಏಟು ಬೀಳುತ್ತಿತ್ತು. ದಲಿತರೆಲ್ಲ ಕ್ರೈಸ್ತರಾಗಿ ಸಮಾಜದ ಮೇಲಸ್ತರಕ್ಕೆ ಹೋದರೆ, ಗೌಡರ ಹೊಲಗಳಲ್ಲಿ ಜೀತ ಮಾಡೋರು ಯಾರು? ಉಳಿಮೆ ಮಾಡೋರು ಯಾರು? ಇವರು ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರೋರು ಯಾರು?... ಒಟ್ಟಾರೆ ಯಜಮಾನಿಕೆಯ ಗತ್ತು ಹೊರಟು ಹೋಗ್ತದಲ್ಲಾ ಎನ್ನುವ ಕೊರಗು ಹೆಗ್ಗಡೆಯವರದೂ ಆಗಿತ್ತು. ಮತ್ತು ಈ ಯಜಮಾನಿಕೆಗೆ ಯಾವತ್ತೂ ಪುರೋಹಿತಷಾಹಿಯ ಸಾಥ್ ಇದ್ದದ್ದೇ. ನಾಟಕದಲ್ಲಿ ಹೆಗ್ಗಡೆಯ ಹುಡುಗರು ಸಂಸ್ಕೃತ ಪಾಠಶಾಲೆಗೆ ಹೋಗೋದು, ಅಯ್ಯಗಳ ಜತೆ ಪಾಠಕ್ಕಾಗಿಯಾದರೂ ಸೌಹಾರ್ದತೆ ಹೊಂದೋದು ಇದಕ್ಕೆ ಪುಷ್ಠಿ ನೀಡುತ್ತದೆ. ಪುರೋಹಿತಷಾಹಿ ಹಾಗೂ ಮೇಲ್ವರ್ಗ ತನ್ನುಳಿವಿಗಾಗೇ ದಲಿತರನ್ನು ಅನ್ಯ ಸಂಸ್ಕೃತಿಯತ್ತ ಹೊರಡದಂತೆ ನೋಡಿಕೊಳ್ಳೋದು ಹಿಂದೂ ಧರ್ಮದ ಉದ್ಧಾರ!.

ಇದೆಲ್ಲ ನಿರ್ದೇಶಕ ಬಸವಲಿಂಗಯ್ಯ ಅವರಿಗೆ ಕಾಡಿಲ್ಲ. ಗುತ್ತಿಯನ್ನು ಹೀರೋ ಮಾಡಬಹುದಲ್ಲ ಎನ್ನುವ ಸಾಧ್ಯತೆಯೊಂದು ಅವರನ್ನು ಯಾಮಾರಿಸಿಬಿಟ್ಟಿದೆ. ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಒಂದಷ್ಟು ಸವಲತ್ತುಗಳ ಆಮಿಷಗಳಿರೋದರಿಂದ ದಲಿತರೆಲ್ಲ ಅದರತ್ತ ಸರಿದು ನಿಂತಿದ್ದಾರಲ್ಲ ಹಾಗೆ, ಬಸಲಿಂಗಯ್ಯ ಕೂಡ ಕಥೆಯ ಆಶಯಗಳನ್ನು ಒಪ್ಪಿಕೊಂಡಿದ್ದಾರೆ. ಅದರ ಹುನಾರಗಳನ್ನು ಸುಮ್ಮನೇ ಕಡೆಗಣಿಸಿದ್ದಾರೆ. ಹೀಗಾಗಿ ಅವರ ಸಬ್ ಟೆಕ್ಸ್ಟ್ ಇಲ್ಲಿ ಅಷ್ಟು ಕೆಲಸ ಮಾಡಿಲ್ಲ. ಮತಾಂತರ ವಿರೋಧಿ ನೆಲೆಯಲ್ಲಿ ಇದೊಂದು ರಾಜಕೀಯ ಅಜೆಂಡಾವನ್ನಾಗಿ ಮಾಡಲು ಸಾಧ್ಯ! ಈ ಹಿನ್ನೆಲೆಯಲ್ಲೇ ನಾಟಕಕ್ಕೆ ಘನ ಸರ್ಕಾರದ ಪ್ರಾಯೋಜಕತ್ವವೂ ದಕ್ಕಿರಬಹುದು.

ಪಾದ್ರಿ ಪಾತ್ರವನ್ನು ಇವರು ಕಂಡ ರೀತಿಯೇ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಒಂದು ವೇಳೆ ಇಂಗ್ಲಿಷ್ ಭಾಷೆಯೇ ಬರದಿದ್ದರೆ ಕುವೆಂಪು ಇಷ್ಟು ದೊಡ್ಡ ಸಾಹಿತಿಯಾಗಲು ಸಾಧ್ಯವಿತ್ತೆ? ದೊಡ್ಡವರಾಗಲು, ವಿದ್ಯಾವಂತರಾಗಲು ಕ್ರೈಸ್ತರು ಸ್ಥಾಪಿಸುವ ಶಾಲೆಗಳು ಹಾಸ್ಟೆಲ್ ಗಳೆಲ್ಲ ಬೇಕು... ರೋಗ ರುಜಿನಗಳೆಲ್ಲ ಆವರಿಸಿದಾಗ ಅವರು ಸ್ಥಾಪಿಸುವ ಆಸ್ಪತ್ರೆಗಳು ಬೇಕು, ನೋವಿನಿಂದ ನರಳುತ್ತ ಬೆಡ್ ಮೇಲೆ ಮಲಗಿದ ರೋಗಿಗಳ ತಿಕ ತೊಳೆದು, ಉಚ್ಚೆ ಹೊಯಿಸಿ ಆರೈಕೆ ಮಾಡಲು ದಾದಿಯರ ಸೇವೆ ಬೇಕು.. ಅಂಥ ಆರಾಮ, ಆರೋಗ್ಯ ವ್ಯವಸ್ಥೆ ಮಾಡಲು ಕ್ರೈಸ್ತ ಧರ್ಮ, ಕ್ರೈಸ್ತರು ಬೇಕು. ಆದರೆ, ಅವರ ಕೆಲ ಧಾರ್ಮಿಕ ಆಶಯಗಳು ಮಾತ್ರ ಇಲ್ಲೇನೂ ಮಾಡಬಾರದು!

ಪಾದ್ರಿಯ ಮಗಳ ಮೇಲೆ, ದಾದಿಯರ ಮೇಲೆ ಕಣ್ಣು ಹಾಕುವ ದೇವಯ್ಯ, ಲುಚ್ಚಾ, ಲೋಫರ್, ಫಟಿಂಗ್ ಏನೂ ಅನ್ನಿಸಿಕೊಳ್ಳುವುದಿಲ್ಲ. ಅದು ಅವನ ರಸಿಕತೆಯ ಸಂಕೇತವಷ್ಟೇ. ಹೀಗಾಗೇ ಈ ಪಾತ್ರ ಇಲ್ಲಿ ಕಾಮಿಡಿ ಪಾತ್ರವಾಗಿದೆ. ಇದೇ ಧೋರಣೆ ಕುಂಟ ವೆಂಕಣ್ಣ ಪಾತ್ರಕ್ಕೂ ಇದೆ. ಆತ ಗಂಡ ಸತ್ತ ಹಾಗೂ ಇನ್ನೂ ವಯಸ್ಸಿರುವ ಹೆಣ್ಣುಗಳ ಮೇಲೆ ಕಣ್ಣು ಹಾಕಬಲ್ಲ. ಅದು ಅವನ ಪುರುಷ ಅಹಮಿಕೆಯೂ ಹೌದು, ರಸಿಕತೆಯೂ ಹೌದು.. ಆದರೆ ಲಂಪಟತನವಲ್ಲ! ಇದೆಂಥ ಮನೋಧರ್ಮ?

ಹೆಗ್ಗಡೆಯವರಿಗೆಲ್ಲ ಹಂದಿ ಹಿಡಿಯಲು ದಲಿತರೇ ಬೇಕು. ಮತ್ತು ಅದರ ಚರ್ಮ ಸೀಳಿ ಮಾಂಸ ತೆಗೆದು ಅವರ ಕೈಗೇ ಇಡಬೇಕು. ದಲಿತರು ತಮಗಲ್ಲೋ ಅದರ ಕರುಳೋ, ಗಾಯಗೊಂಡ ಜಾಗದ ಮಾಂಸವೋ, ಹಂದಿಯ ತೊರಡೋ, ತಲೆಯೋ ಮಾತ್ರವನ್ನೇ ಪಡೆಯಬೇಕಾದ್ದು ಮಲೆನಾಡಿನ ಆ ಭಾಗದ ಸಾಮಾಜಿಕ ನ್ಯಾಯ! ಅಥವಾ ಅದೊಂದು ಸಂರಚನೆ. ಇಡೀ ನಾಟಕದಲ್ಲಿ ಇದೆಲ್ಲ ತಮಾಷೆಯಾಗಿ ಮತ್ತು ಸಾಮಾಜಿಕ ಸ್ಥಿತಿಗತಿಯ ಕಟ್ಟುಪಾಡುಗಳಿಗೆ ಪೂರಕವಾಗೇ ಇದೆ. ಇದೆಲ್ಲ ದುರಾಡಳಿತ ಎನಿಸೋದೇ ಇಲ್ಲ. ಹೆಗ್ಗಡೆಯರ ದಬ್ಬಾಳಿಕೆ ಅನಿಸೋದೇ ಇಲ್ಲ. ಆಗಿನ ಸ್ಥಿತಿಯೇ ಹಾಗಿತ್ತು ಎನ್ನುವುದು ಕೇವಲ ಸಮಜಾಯಿಷಿ.

ಮುಸ್ಲೀಮರ ಸ್ಥಿತಿಯೂ ಇಲ್ಲಿ ಹೊರತಾಗಿಲ್ಲ. ಯಾರದೋ ಕದ್ದ ಮಾಲು, ವಸ್ತುಗಳಿಗೆ ಬದಲಾಗಿ ಹಣ ನೀಡುವ ಕಸುಬನ್ನು ಅದಾವ ಮೂಲೆಯ ಮುಸಲ್ಮಾನರು ಮಾಡುತ್ತಾರೋ?... ಪಾನ್ ಬ್ರೋಕರ್ ಕೆಲಸವಾಗಲಿ, ಬಡ್ಡಿ ವ್ಯಾವಹಾರವಾಗಲಿ ಇಸ್ಲಾಮಿನಲ್ಲಿ ನಿಷಿದ್ಧ. ಹಾಗೆ ಮಾಡೋರನ್ನು ಇಸ್ಲಾಂ ತನ್ನೊಳಕ್ಕಿಟ್ಟುಕೊಳ್ಳಲ್ಲ. ಇದನ್ನು ಇಸ್ಲಾಂ ಶತಮಾನಗಳ ಕಾಲ ಪಾಲಿಸಿಕೊಂಡು ಬಂದಿದೆ. ಇನ್ನು ಇದಾವ ಹೊನ್ನಾಳಿ ಅಥವಾ ಮಲಬಾರಿ ಸಾಬರು ಎನ್ನುವ ಮುಸಲ್ಮಾನ ವೇಷಧಾರಿಗಳೋ! ನಾಟಕದ ತುಂಬ ಇಸ್ಲಾಂ ಅನ್ನು ಹಣಿಯಲು ಮಾಡಿದ ಪುಡಿ ಪಾತ್ರಗಳಿವೆಲ್ಲ. ತಮ್ಮದೇ ಲಾಭಕ್ಕೆ ಏನೋ ಪುಸಲಾಯಿಸಿ ಮುಸ್ಲೀಮರ ಕೈಯಿಂದ ತಪ್ಪು ಕೆಲಸ ಮಾಡಿಸುವ ಹೆಗ್ಗಡೆಯರು ಅದೆಲ್ಲ ಬೇರೇನೋ ಸ್ವರೂಪ ಪಡಕೊಂಡಾಗ ಎಲ್ಲ ತಪ್ಪನ್ನು ಅವರ ಮೇಲೇ ಹಾಕಿಬಿಡೋದು! ಕಚ್ಚಾಟ, ಕೆಸರಾಟ ಶುರುವಾದಾಗ 'ನಿಮಗೆ ಹೊಡೆಯೋದು ಕಡಿಯೋದು ಬಿಟ್ಟರೆ ಬೇರೇನೂ ಗೊತ್ತಿಲ್ಲವೇನ್ರೋ' ಎಂದು ಗದರಿಸುವ ಮತ್ತು ಪೊಲೀಸರ ಮೂಲಕ 'ಇತ್ತೀಚೆಗೆ ಈ ಸಾಬರದು ಹಾರಾಟ ಜಾಸ್ತಿಯಾಗಿದೆ. ಇಕ್ರಲೋ ಈ ಸಾಬರನ್ನ' ಎಂದು ಅಬ್ಬರಿಸುವ, ದಲಿತರು ಮತ್ತು ಸಾಬರ ನಡುವೆ ಜಗಳ ಹಚ್ಚಿ ರಕ್ತಪಾತ ಮಾಡಿಸುವ ದೃಶ್ಯಗಳು ಮುಸ್ಲೀಮರ ವಿರುದ್ಧದ ಹುನಾರುಗಳಲ್ಲದೇ ಏನೂ ಅಲ್ಲ. ಹೊನ್ನಾಳಿಯ ಸಾಬರದು ಲೇವಾದೇವಿ ಕಸುಬೇ ಆಗಿರಬಹುದು. ಇಲ್ಲವೇ ಹೆಗ್ಗಡೆಯರ ಕುಮ್ಮಕಿನಿಂದ ಅವರೆಲ್ಲ ಒಂದಷ್ಟು ದರ್ಪವನ್ನೂ ಮಾಡುತ್ತಿರಬಹುದು. ಆದರೆ, ಅದೆಲ್ಲ ಆ ಪ್ರದೇಶದ ಸಾಮಾಜಿಕ ಹಣೆಬರಹ. ಹೆಗ್ಗಡೆಯರ ಹಾದರ, ದಬ್ಬಾಳಿಕೆ, ಶೋಷಣೆ ಹೇಗೆ ಅಲ್ಲಿನ ಸಾಮಾಜಿಕ ಸ್ಥಿತಿಯ ಒಂದು ಭಾಗವೋ ಹೊನ್ನಾಳಿ ಸಾಬರದೂ...

ಈಗಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಕ್ರೈಸ್ತರು ಮತ್ತು ಮುಸಲ್ಮಾನರು ಹೇಗೆ ಒಂದು ಪಕ್ಷದ ಅಥವಾ ಆ ಧರ್ಮಗಳೇತರರ ಟಾರ್ಗೆಟ್ ಆಗಿದ್ದಾರೋ, ಅದನ್ನೇ ನಾಟಕವೂ ಪ್ರತಿನಿಧಿಸುತ್ತಿರುವುದು ಸ್ಪಷ್ಟವಾಗಿದೆ. ರಂಗಾಯಣ ಸರ್ಕಾರದ ಹಣ ಪಡೆದುಕೊಂಡೇ ತನ್ನ ರಂಗಸಂಸ್ಕೃತಿ ಕಟ್ಟಿಕೊಳ್ಳಬೇಕಾದ್ದರಿಂದ ಪಡೆದ ಹಣಕ್ಕೆ ಹೀಗೆ ಋಣಭಾರ ತೀರಿಸದೇ ಬೇರೆ ದಾರಿಯಾದರೂ ಇದೆಯಾ?

ಗುತ್ತಿಯ ದೈನ್ಯತೆ ಮತ್ತು ಸೆನ್ಸ್ ಆಫ್ ಹ್ಯೂಮರ್ ಹಾಗೂ ಒಂದು ಮಟ್ಟಿನ ಸುಳ್ಳುಪಳ್ಳು ಇಡೀ ಪಾತ್ರಕ್ಕೆ ಸೋಗು ತುಂಬಿದೆ. ಅದು ಮುಗ್ಧತೆ ಎನ್ನುವ ಸೋಗೂ ಆಗಬಹುದು. ಅದರ ಸೋಗಿನಲ್ಲೇ ಇತರರ ಅನುಕಂಪೆ ಪಡೆಯಲು ಸಾಧ್ಯ, ಯಾಮಾರಿಸಲೂ ಸಾಧ್ಯ ಮತ್ತು ಬಚಾವಾಗಬಲ್ಲ ಅನಿವಾರ್ಯದ ಕ್ರಮ ಎಂದು ಧ್ವನಿಸುವುದು ಕೂಡ ಸಾಧ್ಯ ಎಂಬಂತಿದೆ.

ಆಗಿನ ಸಾಮಾಜಿಕ ಸ್ಥಿತಿಯಲ್ಲಿ ಗುತ್ತಿಯದೂ ಅವನ ನಾಯಿಯಂಥದೇ ಪಾಡು. ಒಡೆಯನ ಪ್ರೀತಿಗಾಗಿ ಮತ್ತು ಅವ ಕೊಡುವ ಎಂಜಿಲಿಗಾಗಿ ಬಾಲ ಅಲ್ಲಾಡಿಸುತ್ತ ಹಿಂಬಾಲಿಸುವುದು ನಾಯಿಯ ಜೀತದಾಳುವಿನಂಥ ಮನಸ್ಥಿತಿ. ಅದೇ ಆಗಿನ ದಲಿತರ ಸ್ಥಿತಿಯೂ ಕೂಡ. ಗುತ್ತಿಗೆ ಅವನ ನಾಯಿ ನಂಬಿಕೆಯ, ಪ್ರೀತಿ, ನಿಷ್ಠೆಯ ಪ್ರತೀಕ. ಅವನ ಜೀವ ಉಳಿಸಬಲ್ಲ ನಂಬಿಕಸ್ಥ ಭಂಟನಂತೆ.

ಕೊನೆಯ ದೃಶ್ಯವಂತೂ ತುಂಬ ಸಾಂಕೇತಿಕವಾಗಿದೆ. ದೋಣಿ ದಾಟುವಾಗ, ಗುತ್ತಿ ಯಾವುದೋ ಹೆಗ್ಗಡೆಯರ ಸಹಾನುಭೂತಿ ಗಳಿಸಿಕೊಂಡಿರುತ್ತಾನೆ. 'ಹೇ ನಮ್ಮ ಹುಡುಗ ಕರಕೊಂಡು ಹೋಗ್ರೋ' ಎನ್ನುವ ಆದೇಶದಿಂದಾಗೇ ಗುತ್ತಿಗೆ ದೋಣಿಯಲ್ಲಿ ಜಾಗ ಸಿಗುತ್ತದೆ. ನಾಯಿಗೆ ಮಾತ್ರ ಅಲ್ಲಿ ಅವಕಾಶವಿಲ್ಲ. 'ಹುಲಿಯ' ಹೋಗೋ ಈಜೋ ದಾಟಿ ಆ ಕಡೆಗೆ ಬಾರೋ ನಾನು ಕಾಯತೀನಿ... ಎನ್ನುವ ಗುತ್ತಿ ನಾಯಿಯನ್ನು ಸೆಳವಿನ ಒಡಲಿಗಟ್ಟಿಬಿಡುತ್ತಾನೆ. ನಾಯಿ ಸೆಳವಿನಲ್ಲಿ ಕೊಚ್ಚಿ ಹೋಗುತ್ತದೆ. ಗುತ್ತಿ ರೋದಿಸುತ್ತಾನೆ. ಅಂದರೆ ಇಲ್ಲಿ ಗುತ್ತಿ ತಾನುಳಿದುಕೊಳ್ಳಲು ತನ್ನ ನಂಬಿಕೆಗಳನ್ನೇ ಬಲಿಕೊಡುತ್ತಾನೆ. ಕೇರಿಯ ನಂಬಿಕೆಗಳು, ಆಚಾರ, ವಿಚಾರ, ಜೀವಪರ ಆಶಯಗಳನ್ನು ಬಲಿಕೊಟ್ಟಂತೆ ಅದು. ಮೀಸಲಾತಿ ಅಂಥದೊಂದು ವ್ಯವಸ್ಥೆ. ಮೇಲ್ವರ್ಗದವರು ತಮಗೆಂದೇ ಮಾಡಿಕೊಂಡ ವ್ಯವಸ್ಥೆಯದು. ಗುತ್ತಿಯರು ತಮ್ಮ ಮುಗ್ಧತೆಗೋ ಅಥವಾ ಬದುಕಲೇಬೇಕೆಂಬ ಹಟಕ್ಕೋ ಬಲಿಕೊಡುವ ನಂಬಿಕೆಗಳವು. ಹೀಗೆ ಕೇರಿಗಳನ್ನು ಬಿಟ್ಟು ಕೋರ್ಟು, ಕಚೇರಿಗಳಲ್ಲಿ ಸೂಟು ಬೂಟು ಹಾಕಿಕೊಂಡು ಮೈಮರೆತು ಕಡೆಗೆ ಕೇರಿ ಮತ್ತು ಜೀವಪರ ಆಶಯಗಳನ್ನೇ ಮರೆತು ಕಂಫರ್ಟ್ ದೋಣಿಗಳಲ್ಲಿ ತೇಲುತ್ತ ಬದುಕುವ ಸೋಗಲಾಡಿತನದ ಸಂಕೇತವದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ